ಪಕ್ಷಿಸಂಕುಲದ ಪ್ಯಾಸರೀಫಾರ್ಮಿಸ್ ಗಣಕ್ಕೆ ಸೇರಿದ ಪುಟ್ಟ ಪಕ್ಷಿ. ಈ ಪಕ್ಷಿಗಳಲ್ಲಿ ಹಲವಾರು ಪ್ರಬೇಧಗಳಿವೆ. ಭಾರತದ ರಾಬಿನ್ (ಇಂಡಿಯನ್ ರಾಬಿನ್) ಹೆಚ್ಚು ಕಡಿಮೆ ಗುಬ್ಬಚ್ಚಿಯ ಗಾತ್ರದ್ದು. ಇದರ ವೈಜ್ಞಾನಿಕ ಹೆಸರು ಸ್ಯಾಕ್ಸಿಕೋಲಾಯ್ಗೀಸ್ ಪ್ಯೂಲಿಕೇಟ. ಗಂಡುಪಕ್ಷಿಯ ದೇಹದ ಬಣ್ಣ ಕಪ್ಪು. ಮೇಲಕ್ಕೆ ಎತ್ತಿಕೊಂಡಿರುವ ಬಾಲದ ಕೆಳಗೆ ಕೆಂಗೆಂದು ಬಣ್ಣ ಇರುತ್ತದೆ. ರೆಕ್ಕೆಗಳ ಮೇಲೆ ಬಿಳಿಯ ಬಣ್ಣದ ಮಚ್ಚೆಗಳಿರುತ್ತವೆ. ಪಕ್ಷಿಹಾರುವಾಗ ಈ ಕೆಂಗೆಂದು ಬಣ್ಣಮಿಶ್ರಿತ ಬೂದುಕಂದು ಬಣ್ಣ ಇರುತ್ತದೆ. ಈ ಪಕ್ಷಿಗಳು ಸಾಮಾನ್ಯವಾಗಿ ಹುಲ್ಲುಛಾವಣಿ, ರಸ್ತೆ ಬದಿಯ ಬೇಲಿ ಪೊದೆಗಳು ಅಥವಾ ಕಲ್ಲುಗಳ ಮೇಲೆ ಕುಳಿತು ಅತ್ತ ಇತ್ತ ತಿರುಗಿ ನೋಡುತ್ತ ಅಹ್ಲಾದಕರ ಸ್ವರಗೈಯ್ಯುತ್ತಿರುತ್ತವೆ. ತೆರೆದ ಬಯಲುಗಾಡುಗಳಲ್ಲಿ ಜೋಡಿಜೋಡಿಯಾಗಿ ಕಾಣಬರುತ್ತದೆ. ಹಕ್ಕಿಗಳು ಸಾಮಾನ್ಯವಾಗಿ ಪೊದೆ ಇಲ್ಲವೆ ಹುತ್ತಗಳ ಬಳಿ ಇದ್ದು ಕೀಟಗಳನ್ನು ಹಿಡಿಯುತ್ತವೆ. ಕೀಟ, ಚಿಟ್ಟೆ, ಇಲ್ಲವೆ ಪತಂಗಗಳು ಇವುಗಳ ಮುಖ್ಯ ಆಹಾರ, ಗೆದ್ದಲು, ಹುಳುಗಳೂ ಇವಕ್ಕೆ ಆಹಾರವಾಗುತ್ತದೆ. ಗಂಡಿನ ಹಾಡು ಬಲು ಉಲ್ಲಾಸಮಯವಾಗಿದ್ದು ಪ್ರಣಯಾಚರಣೆಗೆ ಹೆಣ್ಣನ್ನು ಆಹ್ವಾನಿಸುವಂತಿದೆ. ಗಂಡು ಹಾಡುವಾಗ ತನ್ನ ಎದೆಯನ್ನು ಉಬ್ಬಿಸಿಕೊಂಡು, ಹೆದರಿಸುವಂತೆ ತನ್ನ ದೇಹವನ್ನು ಮೇಲಕ್ಕೆ ಎತ್ತುತ್ತ ಬಾಲ ತನ್ನ ಬೆನ್ನಮೇಲೆ ಪೂರ್ತಿಯಾಗಿ ಬರುವಂತೆ ಮಾಡಿಕೊಳ್ಳುತ್ತದೆ. ಈ ಹಕ್ಕಿ ಸಾಮಾನ್ಯವಾಗಿ ಗೂಡುಕಟ್ಟುವುದು ಸಣ್ಣ ಬಂಡೆಗಳ ತಳಭಾಗ, ಮಣ್ಣಿನ ಪೊಟರೆ, ಬಿಸಾಡಿದ ಡಬ್ಬ, ಮಡಕೆ ಇತ್ಯಾದಿಗಳಲ್ಲಿ ಮಿರುಗೆಂಪಿನ ಕಂದುಬಣ್ಣದ ಮಚ್ಚೆ ಇರುವ 2 ರಿಂದ 3 ಮೊಟ್ಟಗಳನ್ನು ಇಡುತ್ತದೆ. ಹೆಣ್ಣು ಮೊಟ್ಟೆಗೆ ಕಾವು ಕೊಡುವುದಾದರೆ ಗಂಡು ಇತರ ಕೆಲಸಗಳಲ್ಲಿ ತೊಡಗಿರುತ್ತದೆ. ಮರಿಮಾಡುವ ಕಾಲ ಏಪ್ರಿಲ್‍ನಿಂದ ಜೂನ್ ತಿಂಗಳ ತನಕ. ಭಾರತ ಉಪಖಂಡ ಮತ್ತು ಶ್ರೀಲಂಕಾಗಳಲ್ಲಿ ಇವು ಕಾಣಸಿಗುತ್ತವೆ.

ಓರಿಯಂಟಲ್ ಮ್ಯಾಗ್ ಪೈ ರಾಬಿನ್ (ಕಾಲ್ಸಿಕಸ್ ಸೌಲಾರಿಸ್ ಪ್ರಬೇಧ) ಎಂಬುದು ಬುಲ್‍ಬುಲ್ ಪಕ್ಷಿ ಗಾತ್ರದ್ದು. ಒಣಗಿರುವ ಹಾಗೂ ಶೈತ್ಯದಿಂದ ಕೂಡಿದ ಎಲೆಗಳು ಉದುರುವ ಕಾಡುಗಳು, ಊರಿನ ಹೊರವಲಯದ ಕಾಡುಗಳು ಹಾಗೂ ಮನುಷ್ಯನ ವಾಸದೆಡೆಗಳಲ್ಲಿ ಇವು ಕಾಣಸಿಗುತ್ತವೆ. ಗಂಡುಪಕ್ಷಿಯ ಬಣ್ಣ ಕಪ್ಪು ಮತ್ತು ಬಿಳಿ. ಹೆಣ್ಣು ಪಕ್ಷಿಯದು ಬೂದು ಇಲ್ಲವೆ ಕಂದು ಬಣ್ಣ. ಗಂಡು ಸಾಮಾನ್ಯವಾಗಿ ಬಾಲವನ್ನು ಮೇಲೆತ್ತಿಕೊಂಡಿರುತ್ತದೆ. ಪಕ್ಷಿಗಳು ಮನೆಗಳ ಸಮೀಪದಲ್ಲೇ ಒಂಟಿಯಾಗೊ ಜೋಡಿಯಾಗೊ ಓಡಾಡುತ್ತಿರುತ್ತವೆ. ಗಂಡು ಹೊರಗೆ ಗೋಚರಿಸದಂತೆ ಪೊದರು ಮತ್ತು ಸಸ್ಯಗಳಲ್ಲಿ ಅವಿತುಕೊಂಡು ವಿಲಕ್ಷಣ ಧ್ವನಿಗೈಯುತ್ತದೆ. ಹಾಡುವಾಗ ತನ್ನ ಬಾಲವನ್ನು ಮೇಲಿಂದ ಕೆಳಕ್ಕೂ ಆಡಿಸುತ್ತದೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿಗಳು ಒಂದಕ್ಕೊಂದು ಕೀಟಾಹಾರಿಗಳು. ಅಪರೂಪಕ್ಕೆ ಚಿಕ್ಕ ಚಿಕ್ಕ ಹಣ್ಣುಗಳನ್ನೂ ತಿನ್ನವುದುಂಟು. ಬೂರುಗ, ಹಾಲಿವಾಣದ ಆಕರ್ಷಕ ಕೆಂಪು ಹೂಗಳಲ್ಲಿನ ಮಧು ಇವಕ್ಕೆ ಬಲುಪ್ರಿಯ. ಭಾರತ, ಅಂಡಮಾನ್ ದ್ವೀಪಗಳು ಮತ್ತು ಶ್ರೀಲಂಕಾಗಳಲ್ಲಿ ಇವು ಕಾಣಬರುತ್ತದೆ.

ಅಮೆರಿಕದ ರಾಬಿನ್ (ಟುರ್ಡಸ್ ಮೈಗ್ರಟೋರಿಯನ್ ಪ್ರಬೇಧ) ಆಕರ್ಷಕ ಬಣ್ಣ ಹೊಂದಿರುವ, ವಲಸೆಗಾರ ಪುಟ್ಟ ಪಕ್ಷಿ. ಇದರ ಉದ್ದ ಸುಮಾರು 25 ಸೆಂ.ಮೀ. ವಸಂತಋತುವಿನ ಆರಂಭದಲ್ಲಿ ಈ ಪಕ್ಷಿ ವಲಸೆಹೋದ ಸ್ಥಳದಿಂದ ಮರಳಿಬಂದು ತನ್ನ ಮಧುರ ಇಂಚರದಿಂದ ಮುದಗೊಳಿಸುತ್ತದೆ. ಇದಲ್ಲದೆ ಈ ಪಕ್ಷಿ ಹಾನಿಕಾರಕ ಕೀಟಗಳನ್ನು ನಾಶಗೊಳಿಸುವುದರಿಂದ ಇದೊಂದು ಉಪಯುಕ್ತ ಪಕ್ಷಿಯೆನಿಸಿದೆ. ಹೆಣ್ಣು ಹಸುರುಮಿಶ್ರಿತ ನೀಲವರ್ಣದ ಮೊಟ್ಟೆಗಳನ್ನಿಡುತ್ತದೆ. ಸಾಧಾರಣವಾಗಿ ಮರಿಗಳನ್ನು ಎರಡು ತಂಡಗಳಲ್ಲಿ ಬೆಳೆಸುತ್ತದೆ. ಉತ್ತರ ಅಮೆರಿಕದ ಪಶ್ಚಿಮ, ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಈ ಪ್ರಭೇದದ ವಿವಿಧ ಭೌಗೋಳಿಕ ರೂಪಗಳು ಕಂಡುಬರುತ್ತವೆ.

ಯುರೇಷಿಯದ ರಾಬಿನ್ ಮಧುರವಾಗಿ ಹಾಡುವ ಪುಟ್ಟ ಪಕ್ಷಿ. ಎರಿಥ್ಯಾಕಸ್ ರುಬೆಕುಲ ಇದರ ಶಾಸ್ತ್ರೀಯನಾಮ. ಇದನ್ನು ಬ್ರಿಟನ್ನಿನ ರಾಷ್ಟ್ರೀಯ ಪಕ್ಷಿ ಎಂದು ಪರಿಗಣಿಸಲಾಗಿದೆ. 13 ಸೆಂಮೀ ಉದ್ದವಿರುವ ಪುಕ್ಕಗಳಿವೆ. ಗಂಟಲು ಮತ್ತು ಹಣೆಗೆ ಬೂದುಬಣ್ಣದ ಅಂಚು ಇದೆ. ಈ ಪಕ್ಷಿ ತನ್ನ ಚಿಕ್ಕ ಮೊನಚಾದ ಕೊಕ್ಕಿನಿಂದ ಕೀಟ, ಡಿಂಬ, ಎರೆಹುಳು, ಹಣ್ಣು ಮತ್ತು ಬೀಜಗಳನ್ನು ಎತ್ತಿಕೊಂಡು ತಿನ್ನುತ್ತದೆ. ಬ್ರಿಟನ್ನಿನಲ್ಲಿ ಈ ಪಕ್ಷಿ ಪಟ್ಟಣ, ತೋಟ ಮತ್ತು ಕೃಷಿಭೂಮಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಬರುತ್ತದೆ. ಈ ಪಕ್ಷಿ ತಮ್ಮ ಸುತ್ತಮುತ್ತಲಿನ ಭೂಪ್ರದೇಶವನ್ನು ಗುರುತಿಸಿಕೊಂಡು ಸೀಮೆಯನ್ನು ಕಾಯ್ದುಕೊಳ್ಳುತ್ತದೆ. ತನ್ನ ಸೀಮೆಯೊಳಗೆ ಬರುವ ಆಗಂತುಕರನ್ನು ತನ್ನ ಹಾಡಿನ ಮೂಲಕ ಎಚ್ಚರಿಸುವುದೂ ಉಂಟು. ಪಕ್ಷಿಗಳ ಕೂಗು ಅವುಗಳ ಸೀಮೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೂ ಬಳಕೆಯಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ರಾಬಿನ್ ಹಕ್ಕಿಯ ಕೂಗು.

(ಎಚ್.ಎನ್.ವೈ)
(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ